← All journal entries
28 May 2026 PD

Prakasam is now 25, Mangala Maam's kind words

ಪ್ರಕಸಂ ತಂಡಕ್ಕೀಗ 25 ವರ್ಷ.


ಅಭಿನಂದನೆಗಳು❤

ಆದರೆ ಅಷ್ಟೇ ಹೇಳಲು ಸಾಧ್ಯವಿಲ್ಲ. ಯಾಕೆಂದರೆ,

ಇವತ್ತು ಸಂಚಾರಿ ಥಿಯೇಟರ್ ಇಟ್ಟ ದಿಟ್ಟ ಹೆಜ್ಜೆ ಗುರುತುಗಳಲ್ಲಿ ಪ್ರಕಸಂ ಮತ್ತು PD ಸತೀಶ್ ಅವರ Unconditional love ಮತ್ತು ಬಂಡೆಯ ತರಹದ ಬೆಂಬಲ ಇತ್ತು ಎಂಬುದನ್ನು ತಿಳಿಸಲು ನನಗೆ ಖುಷಿಯಿದೆ.

2012 ರಲ್ಲಿ ನನಗೆ PD ಸತೀಶ್ ಚಂದ್ರ ಅವರ ಪರಿಚಯವಾಯ್ತು. ಆ ಹೊತ್ತಿಗೆ ಅವರು ಬೆಂಗಳೂರಿನ ಹನುಮಂತನಗರದಲ್ಲಿರುವ ಕೆ.ಹೆಚ್.ಕಲಾಸೌಧ ರಂಗಮಂದಿರವನ್ನು ನಿರ್ವಹಿಸುವ ಜವಾಬ್ದಾರಿ ತೆಗೆದುಕೊಂಡಿದ್ದರು. ಆ ರಂಗಮಂದಿರದ ತಳಭಾಗದಲ್ಲಿ ಗುಂಡಪ್ಪ ಆರ್ಟ್ ಗ್ಯಾಲರಿ ಹೆಸರಿನಲ್ಲಿ ಖಾಲಿ ಜಾಗವಿತ್ತು. PD ಯವರು ಆ ಜಾಗದಲ್ಲಿ ಸಂಚಾರಿ ಥಿಯೇಟರ್ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ರಂಗತಂಡವೊಂದು ತನ್ನದೇ ಒಂದು ಜಾಗವನ್ನು ದಿನದ 24 ಗಂಟೆಯೂ ತನ್ನ ಸುಪರ್ದಿಯಲ್ಲಿಟ್ಟುಕೊಂಡು ಬೇಕಾದ ಸಮಯದಲ್ಲಿ ಕೆಲಸ ಮಾಡುವ ಸ್ವಾತಂತ್ರ್ಯ ದ ಅದ್ದೂರಿತನವನ್ನು ಕನಸು ಕಾಣುವ ದೈರ್ಯ ನಮ್ಮೊಳಗೆ ಹುಟ್ಟುವಂತೆ ಮಾಡಿದ PD ಸತೀಶ್ ಅವರಿಗೆ ಸಂಚಾರಿ ಥಿಯೇಟರ್ ಎಂದಿಗೂ ಆಭಾರಿಯಾಗಿರುತ್ತದೆ. ಸಂಚಾರಿ ಥಿಯೇಟರ್ ಹನುಮಂತನಗರದಲ್ಲಿ ಸ್ಥಾಪಿತಗೊಂಡ ಕ್ಷಣದಿಂದ ನಮ್ಮೊಳಗೆ ಹುದುಗಿದ್ದ ಕನಸುಗಳಿಗೆಲ್ಲ ರೆಕ್ಕೆ ಬಂದವು. ಮಕ್ಕಳ ರಂಗಭೂಮಿ ರಂಗೇರಿತು. ರಂಗಶಿಕ್ಷಣಕ್ಕೆ ಚಾಲನೆ ಸಿಕ್ಕಿತು. ಜೊತೆಗೆ ಮಹತ್ತರ ಪ್ರದರ್ಶನಗಳು ಕಳೆಕಟ್ಟಿದವು. ಸಂಜೆಯಾಯಿತೆಂದರೆ ಕಲಾಸೌಧ ಮೇಲೆ ಮತ್ತು ಕೆಳಗೆ ರಂಗಭೂಮಿಯಲ್ಲಿ, ಟಿವಿಯಲ್ಲಿ, ಚಲನಚಿತ್ರದಲ್ಲಿ ಕೆಲಸ ಮಾಡುವ ಎಲ್ಲ ತರದ ಕಲಾವಿದರು ಸೇರುತ್ತಿದ್ದೆವು. ನಾಟಕ ಪ್ರದರ್ಶನ, ನಾಟಕದ ರಿಹರ್ಸಲ್, ರಂಗಶಿಕ್ಷಣದ ತರಗತಿಗಳು, ಮಕ್ಕಳ ಶಿಬಿರಗಳು, ಹಾಡಿನ ರಿಹರ್ಸಲ್ಗಳು, ನಾಟಕದ ಓದು, ಚರ್ಚೆ, ವಾದ, ವಿವಾದ,ಹರಟೆ, ಕೇಕೆ, ಸಡಗರ,ಖುಷಿ ಕಾಫಿ, ಟೀ, ಬೋಂಡ ಬಜ್ಜಿ ಸಮಾರಾಧನೆ - ಹೀಗೆ ಎಲ್ಲವೂ ಏಕಕಾಲದಲ್ಲಿ ಬೇರೆ ಬೇರೆ ಜಾಗಗಳಲ್ಲಿ ನಡೆಯುತ್ತಿದ್ದವು. ಇಡೀ ಜಾಗವನ್ನು ಸಾಂಸ್ಕೃತಿಕವಾಗಿ ಜೀವಂತವಾಗಿರಿಸಲು PD ಅವರ ಚೈತನ್ಯದಾಯಕ ವ್ಯಕ್ತಿತ್ವ ಮುಖ್ಯ ಕಾರಣವಾಗಿತ್ತು. ಎಷ್ಟು ಜನ ಕಲಾವಿದರಿಗೆ ಮಧುರವಾದ ನೆನಪುಗಳನ್ನು ಆ ದಿನಗಳು ಕೊಟ್ಟಿದೆಯೆಂದರೆ, ಈಗಲೂ ಆ ದಿನಗಳನ್ನು ಮೆಲಕು ಹಾಕುತ್ತಾರೆ.

2017 ಕ್ಕೆ ಈ ಎಲ್ಲವೂ ಅಂತ್ಯಗೊಂಡು ನಂತರ ಆ ಕೆ.ಹೆಚ್.ಕಲಾಸೌಧ ಏನಾಯಿತು ಎಂಬುದು ಎಲ್ಲರಿಗೂ ತಿಳಿದ ವಿಷಯ.

ಈ ಹೊತ್ತು ಇವೆಲ್ಲವೂ ನೆನಪಾಯಿತು. ಸಂಚಾರಿಯ ಪಯಣದಲ್ಲಿ ಅದ್ಭುತವಾದ  5 ವರ್ಷಗಳನ್ನು ನಮಗೆ ಕೊಟ್ಟಂತಹ PD ಸತೀಷ್ ಮತ್ತು ಪ್ರಕಸಂ ಅನ್ನು ಸಂಚಾರಿಯ ಬಳಗ ಯಾವತ್ತೂ ನೆನಪಿಸಿಕೊಳ್ಳುತ್ತದೆ.

Thank you so much.❤

Congratulations again.🌸❤

This entry was first published on our blog — read it on Blogspot ↗

← Back to all entries